ಹೋಮರ್
	ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸಿಗಳನ್ನು ಸಂಯೋಜಿಸಿದವನೆಂದು ತಿಳಿಯಲಾದ ಮಹಾಕವಿ. ಈತನ ಬಗ್ಗೆ ವಿಶೇಷ ಮಾಹಿತಿಗಳು ಲಭ್ಯವಿಲ್ಲ. ಕೆಲವರು ಈತ ಏಜಿಯನ್ ಸಮುದ್ರದ ಪೂರ್ವ ತೀರದಲ್ಲಿ ಗ್ರೀಕ್ ಭಾಷೆಯನ್ನಾಡುವ ಪ್ರದೇಶದಲ್ಲಿದ್ದಿರಬೇಕೆಂದೂ ಅಥವಾ ಕಿಯೋಸ್ ದ್ವೀಪದಲ್ಲಿದ್ದಿರ ಬೇಕೆಂದೂ ಹೇಳಿದರೆ ಇನ್ನೂ ಕೆಲವರು ಈತ ಇದ್ದನೆಂಬುದನ್ನೇ ಒಪ್ಪುವುದಿಲ್ಲ. ಐತಿಹ್ಯಗಳ ಪ್ರಕಾರ ಈತ ಅಂಧನಾಗಿದ್ದ. 

	ಈತನದೆಂಬ ಮಹಾಕಾವ್ಯಗಳು ಟ್ರೋಜನ್ ಯುದ್ಧಾವಧಿ ಹಾಗೂ ಅನಂತರದ ಘಟನೆಗಳನ್ನು ಆಧರಿಸಿವೆ. ಕ್ರಿ.ಪೂ.ಸು. 1200ರಲ್ಲಿ ಗ್ರೀಸ್ ಮತ್ತು ಟ್ರಾಯ್ ನಗರಗಳ ನಡುವೆ ನಡೆದ ಯುದ್ಧ ಸಂಗತಿಗಳನ್ನು ಇವು ಪ್ರಾಯಃ ಆಧರಿಸಿವೆ. ಈ ಕಾವ್ಯಗಳೂ ಕ್ರಿ.ಪೂ. 800-700ರ ಅವಧಿಯ ಸಾಮಾಜಿಕ ಪರಿಸ್ಥಿತಿಗಳನ್ನು ಹೇಳುವುದರಿಂದ ಈ ಅವಧಿಯಲ್ಲಿ ಇವು ಸಂಯೋಜನೆಗೊಂಡಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

	ಈ ಕಾವ್ಯಗಳಲ್ಲಿ ವರ್ಣಿಸಲಾದ ಕೆಲವು ಸಂಗತಿಗಳಿಗೆ ಚಾರಿತ್ರಿಕ ಆಧಾರ ಒದಗಿಸುವಂಥ ಪುರಾವೆಗಳನ್ನು ಟ್ರಾಯ್ ಮತ್ತು ಗ್ರೀಸ್ ಅವಶೇಷಗಳಲ್ಲಿ ಪುರಾತತ್ತ್ವಜ್ಞರು ಪತ್ತೆಹಚ್ಚಿದ್ದಾರೆ. ಕಾವ್ಯಗಳಲ್ಲಿ ಚಿತ್ರಿತವಾಗಿರುವ ಪಾತ್ರ ಮತ್ತು ಘಟನೆಗಳು ಭಾಗಶಃ ನಿಜವಾದ ವ್ಯಕ್ತಿ ಮತ್ತು ಚಾರಿತ್ರಿಕ ಸಂಗತಿಗಳನ್ನಾಧರಿಸಿದ್ದರೂ ಜನಪದ ಗಾಯಕರಿಂದಲೂ ಕಥೆಗಳಿಂದಲೂ ಶತಮಾನಗಳಿಂದ ಪರಿಷ್ಕರಣೆಗೆ ಒಳಗಾಗಿವೆ. ಜನಪದ ಗಾಯಕರು (ಬಾಡ್ರ್ಸ್) ಟ್ರೋಜನ್ ಯುದ್ಧ ವಿವರಗಳನ್ನು ಸರಣಿ ಯೋಪಾದಿ ಸೃಷ್ಟಿಸಿ ಹಾಡುತ್ತಿದ್ದರು. ಇವುಗಳಲ್ಲಿ ಇವೆರಡು ಕಾವ್ಯಗಳು ಮಾತ್ರ ಉಳಿದು ಬಂದಿವೆ ಎನ್ನಲಾಗಿದೆ.

	ಈತನ ಕಾಲಾನಂತರ ಗ್ರೀಸಿನ ಧಾರ್ಮಿಕ ಮಹೋತ್ಸವಗಳಲ್ಲಿ ಈ ಕಾವ್ಯಗಳ ಪಠಣಮಾಡಲಾಗುತ್ತಿತ್ತು. ಪ್ರಾಚೀನ ಗ್ರೀಸಿನ ಐತಿಹ್ಯ ಹಾಗೂ ಪುರಾಣಗಳನ್ನು ಅಭ್ಯಸಿಸಲು ಮತ್ತು ಓದು ಕಲಿಯಲು ಈ ಕಾವ್ಯಗಳು ಗ್ರೀಕ್ ಮಕ್ಕಳ ಆಧಾರ ಪಠ್ಯಗಳಾಗಿದ್ದುವು. ಇದರ ಪರಿಣಾಮವಾಗಿ ಹೋಮರ್‍ನ ದೇವಾನುದೇವತೆಗಳ ಚಿತ್ರಣದ ರೀತಿಯಲ್ಲಿ ಗ್ರೀಕರು ತಮ್ಮ ಧಾರ್ಮಿಕ ರೀತಿನೀತಿಗಳನ್ನು ರೂಪಿಸಿಕೊಳ್ಳುವಂತಾಯಿತು. ಈತನ ಕಾವ್ಯಗಳು ಮಹಾನ್ ದುರಂತ ನಾಟಕಗಳನ್ನು ರಚಿಸಿದ ಕ್ರಿ.ಪೂ. ಸು. 400ರ ಈಸ್ಕಿಲಸ್, ಯೂರಿಪಿಡೀಸ್ ಮತ್ತು ಸಾಫೋಕ್ಲೀಸರ ಮೇಲೆ ಅಗಾಧ ಪರಿಣಾಮ ಬೀರಿದುವು.

	ಈ ಕಾವ್ಯಗಳ ಶ್ರವಣ ಹಾಗೂ ಲಿಖಿತ ಪ್ರತಿಗಳ ಪಠಣಗಳಿಂದ ಗ್ರೀಕರು ಹೋಮರ್‍ನ ಬಗ್ಗೆ ಅರಿಯಲಾರಂಭಿಸಿದರು. ಪ್ರತಿಗಳನ್ನು ತಯಾರಿಸುವಾಗ ತಪ್ಪುಗಳನ್ನೂ ಉದ್ದೇಶಪೂರ್ವಕ ಬದಲಾವಣೆಗಳನ್ನೂ ಬರೆಹಗಾರರು ಮಾಡುತ್ತಿದ್ದರು. ಕ್ರಿ.ಪೂ. 300ರ ವೇಳೆಗೆ ಗ್ರೀಸ್‍ನಲ್ಲಿ ಇಲಿಯಡ್ ಮತ್ತು ಒಡಿಸಿಗಳ ಭಿನ್ನ ಪಾಠಗಳು ಲಭ್ಯವಿದ್ದುವು. ಕ್ರಿ.ಪೂ.ಸು. 300-100ರ ಅವಧಿಯಲ್ಲಿ ಈಜಿಪ್ಟ್‍ನ ಗ್ರೇಟ್ ಅಲೆಕ್ಸಾಂಡ್ರಿಯನ್ ಗ್ರಂಥಾಲಯದ ವಿದ್ವಾಂಸರು ಎರಡೂ ಮಹಾಕಾವ್ಯಗಳ ಬದಲಾವಣೆಗಳನ್ನು ಸರಿಪಡಿಸಲು ಹಾಗೂ ಅವುಗಳ ಮೂಲ ರೂಪವನ್ನು ಕಾಯ್ದಿಡಲು ಪ್ರಯತ್ನಿಸಿದರು. ಕೆಲವು ವಿದ್ವಾಂಸರು ಈ ಕಾವ್ಯಗಳು ಇಬ್ಬರು ಬೇರೆ ಬೇರೆ ಕವಿಗಳಿಂದ ರಚಿತವಾದುವೆಂದು ನಂಬಿದರು. ಈ ವಿದ್ವಾಂಸರನ್ನು ಭಿನ್ನಮಾರ್ಗಿಗಳೆಂದು ಕರೆಯಲಾಯಿತು (ಸಪರೇಟಿಸ್ಟ್ಸ್). ಭಾಷೆ, ದೃಷ್ಟಿಕೋನ ಹಾಗೂ ವಸ್ತುಗಳ ವಿಷಯದಲ್ಲಿ ಇವೆರಡೂ ಕಾವ್ಯಗಳು ಒಬ್ಬನಿಂದಲೇ ರಚಿತವಾಗಿದ್ದರೆ ಇಷ್ಟೊಂದು ವ್ಯತ್ಯಾಸಗಳಿ ರುತ್ತಿರಲಿಲ್ಲ ಎಂದು ಇವರು ವಾದಿಸುತ್ತಾರೆ.

	ಕೆಲವು ಶತಮಾನಗಳ ಕಾಲ ಇವೆರಡೂ ಕಾವ್ಯಗಳ ಸಂಯೋಜಕನ ಪ್ರಶ್ನೆ ಮರೆತೇ ಹೋಗಿತ್ತು. ಅನಂತರ 1795ರಲ್ಲಿ ಜರ್ಮನಿಯ ವಿದ್ವಾಂಸ ಫ್ರೆಡ್ರಿಚ್ ಆಗಸ್ಟ್ ವೂಲ್ಫ್ ಈ ಚರ್ಚೆಯನ್ನು ಪುನಃ ಆರಂಭಿಸಿದ. ಹೋಮರ್ ಬದುಕಿದ್ದನೆಂಬ ಕಾಲದಲ್ಲಿ ಗ್ರೀಕರಿಗೆ ಬರೆವಣಿಗೆ ತಿಳಿದಿತ್ತೆಂಬ ಬಗ್ಗೆ ಪುರಾತತ್ತ್ವಜ್ಞರಲ್ಲಿ ಯಾವ ಸಾಕ್ಷ್ಯವೂ ಇಲ್ಲವೆಂದು ಈತ ವಾದಿಸಿದನಲ್ಲದೆ ಹೋಮರ್ ಎಂಬಾತ ಇರಲೇ ಇಲ್ಲವೆಂಬ ವಿಶ್ಲೇಷಕ ಪಂಥದ ನಾಯಕನೂ ಆದ. ಈ ಪಂಥದವರು ಈ ಕಾವ್ಯಗಳು ಅನೇಕ ಕವಿಗಳ ಕವಿತಾ ಸಂಕಲನಗಳೆಂದು ವಾದಿಸಿದರು. ಕಥೆಗಳಲ್ಲಿರುವ ಅನಿಶ್ಚಿತ ಗುಣ, ಭಾಷಾ ವ್ಯತ್ಯಾಸಗಳು ಹಲವು ಲೇಖಕರು ಇದರಲ್ಲಿ ಪಾಲ್ಗೊಂಡಿದ್ದಾರೆಂಬುದಕ್ಕೆ ಆಧಾರವೆನ್ನುವುದು ಇವರ ವಾದ.

	ಏಕಕರ್ತೃತ್ವದ ಪ್ರತಿಪಾದಕರು ವಿಶ್ಲೇಷಕ ಪಂಥದವರನ್ನು ವಿರೋಧಿಸಿ ಈ ಕಾವ್ಯಗಳು ಪ್ರತಿಭಾವಂತ ಏಕ ಕವಿಯ ಸೃಷ್ಟಿಗಳೇ ಆಗಿವೆ; ಹೆಚ್ಚೆಂದರೆ ಇಬ್ಬರಿರಬಹುದು ಎಂದು ಹೇಳುತ್ತಾರೆ. ಇವರು ಕಥೆಯ ಏಕ ಸೂತ್ರತೆಯನ್ನೂ ನಿಶ್ಚಿತ ಪಾತ್ರ ಚಿತ್ರಣವನ್ನೂ ತಮ್ಮ ವಾದಕ್ಕೆ ಸಮರ್ಥನೆಯಾಗಿ ನೀಡುತ್ತಾರೆ. ಈ ಎರಡು ಪಂಥದವರ ವಾದ ವಿವಾದಗಳು ಹೋಮರಿಕ್ ಸಮಸ್ಯೆ ಎಂದೇ ಪ್ರಸಿದ್ಧವಾಗಿವೆ.

	ಮೌಖಿಕ ಸಾಹಿತ್ಯ ರಚನಾ ಸ್ವರೂಪ ಸ್ಪಷ್ಟವಾಗಿರುವ ಇಂದಿನ ಸಂದರ್ಭದಲ್ಲಿ ಹೋಮರಿಕ್ ಸಮಸ್ಯೆಯನ್ನು ಈ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ. 1930ರ ದಶಕದಲ್ಲಿ ಅಮೆರಿಕದ ವಿದ್ವಾಂಸ ಮಿಲ್ಮನ್ ಪ್ಯಾರಿ ಯುಗೋಸ್ಲಾವಿಯದ ಬಾರ್ಡ್‍ರ ಅಧ್ಯಯನಕ್ಕೆ ತೊಡಗಿದ. ಇವರು ಅನಕ್ಷರಸ್ಥರಾಗಿದ್ದರೂ ದೀರ್ಘ ಕಾವ್ಯಗಳನ್ನು ಮೌಖಿಕವಾಗಿಯೇ ಸಂಯೋಜಿಸುತ್ತಿದ್ದರು. ಇವರು ತಾವು ಹಾಡಿದ ಕಾವ್ಯಗಳನ್ನು ಹಾಗೆಯೇ ಸ್ಮರಿಸಿಕೊಳ್ಳದೇ ಮತ್ತೆ ಮತ್ತೆ ಪುನಾರಚಿಸುತ್ತಿದ್ದರು.

	ಕಾವ್ಯ ಭಾಗದ ಸೃಷ್ಟಿಯಲ್ಲಿ ಇವರು ಸಾಂಪ್ರದಾಯಿಕ ಉಕ್ತಿ, ಸಾಲು ಹಾಗೂ ದೃಶ್ಯಗಳನ್ನು ಮತ್ತೆ ಮತ್ತೆ ಬಳಸಿಕೊಳ್ಳುತ್ತಿದ್ದರು. ಇದರ ಆಧಾರದಲ್ಲಿ ಮಿಲ್ಮನ್ ಪ್ಯಾರಿ, ಇಲಿಯಡ್ ಮತ್ತು ಒಡಿಸಿ ಕಾವ್ಯಗಳು ಇದೇ ತಂತ್ರವನ್ನು ಬೃಹತ್ಪ್ರಮಾಣದಲ್ಲಿ ಬಳಸಿಕೊಂಡಿವೆ ಎಂದು ವಾದಿಸಿದ. ಈತನ ಅಧ್ಯಯನಾಧಾರದ ಮೇಲೆ ಅನೇಕ ವಿದ್ವಾಂಸರು ಹೋಮರ್ ಒಬ್ಬ ಅನಕ್ಷರಸ್ಥ, ಅಸಾಧಾರಣ ಸಾಮಥ್ರ್ಯವಿದ್ದ ಬಾರ್ಡ್‍ನಾಗಿದ್ದ ಎಂದು ಪ್ರತಿಪಾದಿಸಿದ್ದಾರೆ. ಇವರ ವಾದದ ಪ್ರಕಾರ ಹಲವು ಸಂದರ್ಭಗಳಲ್ಲಿ ಹೋಮರ್ ಈ ಕಾವ್ಯಗಳನ್ನು ಹಾಡುತ್ತಿದ್ದ. ಅವನ ಜೀವಿತದ ಕಡೆಗಾಲದಲ್ಲಿ ಬರೆವಣಿಗೆಯನ್ನು ತಿಳಿದ ಗ್ರೀಕರು ಇವುಗಳಿಗೆ ಲಿಪಿ ರೂಪ ನೀಡಿದರು. ಈ ಕಾವ್ಯಗಳು ಗ್ರೀಕ್‍ನಲ್ಲಿದ್ದು ಒಂದು ನಿರ್ದಿಷ್ಟ ನಗರ ಅಥವಾ ಚಾರಿತ್ರಿಕ ಅವಧಿಗೆ ಸೀಮಿತವಾಗಿಲ್ಲ ದಿರುವುದು ಹೋಮರನ ಬಗ್ಗೆ ತಿಳಿಯುವ ವಿದ್ವಾಂಸರ ಯತ್ನವನ್ನು ಸಂಕೀರ್ಣಗೊಳಿಸಿವೆ.

	ಈ ಕಾವ್ಯಗಳು ಮೌಖಿಕ ಪರಂಪರೆಯನ್ನು ಪ್ರತಿನಿಧಿಸುತ್ತವೆಂಬುದನ್ನು ಬಹಳಷ್ಟು ವಿದ್ವಾಂಸರು ಒಪ್ಪುತ್ತಾರಾದರೂ ಈ ಕಾವ್ಯಗಳು ಹೇಗೆ ಸಂಯೋಜನೆಗೊಂಡವು ಅಥವಾ ಸುರಕ್ಷಿತವಾಗಿ ಉಳಿದವೆಂಬ ವಿವರಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ.      (ನೋಡಿ- ಇಲಿಯಡ್)
(ನೋಡಿ--ಒಡಿಸಿ)					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		
		*